ನಿಜಾಮ್ - ಉದ್ - ದೀನ್ ಔಲಿಯಾ, ಷೇಖ್
	1238-1325. ದೆಹಲಿಯ ಒಬ್ಬ ಖ್ಯಾತ ಸೂಫೀ ಸಂತ. ಬೊಖಾರಾದಿಂದ ವಲಸೆ ಬಂದು ಬದೌನ್‍ನಲ್ಲಿ ನೆಲೆನಿಂತಿದ್ದ ಮನೆತನವೊಂದರಲ್ಲಿ ಈತ ಜನಿಸಿದ. ಇವನ ತಂದೆ ಸಯ್ಯದ್ ಅಹ್ಮದ್, ತಾಯಿ ಜುóಲೇಖಾ. ಬದೌನ್‍ನಲ್ಲಿ ಇವನು ಆರಂಭದ ವಿದ್ಯಾಭ್ಯಾಸ ಮುಗಿಸಿ 16ನೆಯ ವಯಸ್ಸಿನಲ್ಲಿ ದೆಹಲಿಗೆ ಹೋಗಿ ಮೌಲಾನಾ ಕಮಾಲ್-ಉದ್-ದೀನ್ eóÁಹೀದ್ ಎಂಬ ಗಣ್ಯ ಸಂತ ವಿದ್ವಾಂಸನ ಬಳಿ ನಾಲ್ಕು ವರ್ಷ ಶಿಕ್ಷಣ ಪಡೆದು, ತನ್ನ ಗುರುವಿನ ಪ್ರಭಾವದಿಂದಲೇ ದೈವಭಕ್ತಿ ವೈರಾಗ್ಯಗಳನ್ನು ಮೈಗೂಡಿಸಿಕೊಂಡ. ಆಜೋಧನ್‍ನ ಖ್ಯಾತ ಸಂತ ಷೇಖ್ ಫರೀದ್ ಗಂಜ್ ಷಕರನ ಬಳಿಗೆ ಹೋಗಿ ಅವನ ನಚ್ಚಿನ ಶಿಷ್ಯನಾದ. ನಿನಗೆ ಇಡೀ ಹಿಂದೂಸ್ತಾನದ ಆಧ್ಯಾತ್ಮಿಕ ಸಾಮ್ರಾಜ್ಯವನ್ನು ನೀಡಿರುವೆ ಎಂದು ಸೂಫೀ ಸಂತ ಷೇಕ್ ಫರೀದ್ ಇವನನ್ನು ಅನುಗ್ರಹಿಸಿದ. ವೈರಾಗ್ಯಮೂರ್ತಿಯಾದ ನಿಜಾóಮ್-ಉದ್-ದೀನ್ ಮದುವೆ ಮಾಡಿಕೊಳ್ಳಲಿಲ್ಲ. ಸ್ವಂತದ ಒಂದು ಮನೆಯನ್ನೂ ಗಳಿಸಲಿಲ್ಲ. ಇವನು ದೆಹಲಿಯಲ್ಲಿ ನೆಲಸಿ ಬಡತನದ ಜೀವನ ನಡೆಸಿದ. ಒಂದು ಹುಲ್ಲಿನ ಮಾಡಿನ ಮಸೀದಿ ಈತನ ಚಟುವಟಿಕೆಗಳ ಕೇಂದ್ರವಾಗಿತ್ತು. ಅನೇಕ ದಿನ ಉಪವಾಸ ಇರುವ ಪ್ರಸಂಗ ಬಂದರೂ ಇವನು ತನ್ನ ಸುತ್ತ ನೆರೆಯುತ್ತಿದ್ದ ಭಕ್ತರಿಂದ ಏನೊಂದು ಸಹಾಯವನ್ನೂ ಯಾಚಿಸುತ್ತಿರಲಿಲ್ಲ. ಉಪವಾಸವಿರಬೇಕಾದ ದಿನಗಳಲೆಲ್ಲ ತಾವು ಅಂದು ದೇವರ ಅತಿಥಿಗಳು ಎಂದು ಹೇಳಿಕೊಂಡು ಇವನ ವಿರಾಗಿ ತಾಯಿ ಸಂತೋಷದಿಂದ ಹೊತ್ತು ಕಳೆಯುತ್ತಿದ್ದಳು. ಷೇಕ್ ಫರೀದ್ 1267ರಲ್ಲಿ ತೀರಿಕೊಂಡಾಗ ತನ್ನ ಮಕ್ಕಳೆಲ್ಲರ ಹಕ್ಕನ್ನೂ ಕಡೆಗಣಿಸಿ ನಿeóÁಮ್-ಉದ್-ದೀನನನ್ನೇ ತನ್ನ ಉತ್ತರಾಧಿಕಾರಿಯಾಗಿ ನೇಮಿಸಿದ.

	ದೆಹಲಿಯ ಸುಲ್ತಾನ ಜóಲಾಲ್-ಉದ್-ದೀನ್ (1290-96) ಈತನಿಗೆ ಗ್ರಾಮವೊಂದನ್ನು ದಾನವಾಗಿ ನೀಡಲು ಮುಂದಾದಾಗ ಇವನು ಅದನ್ನು ತಿರಸ್ಕರಿಸಿದ. ತಾನು ಈ ಸಂತನನ್ನು ಕಾಣಲು ಬರುವುದಾಗಿ ಇವನ ಶಿಷ್ಯನಾದ ಖ್ಯಾತ ವಿದ್ವಾಂಸ ಅಮೀರ್ ಖುಸ್ರುವಿನ ಮುಖಾಂತರ ಸುಲ್ತಾನ ಹೇಳಿಕಳುಹಿಸಿದಾಗ ಇವನು ಸ್ವಲ್ಪ ಕಾಲ ಊರನ್ನೇ ಬಿಟ್ಟಿದ್ದ. ರಾಜಕಾರಣದಿಂದ ಸದಾ ದೂರವಾಗಿರಬೇಕೆಂದು ಇವನ ಇಚ್ಛೆ. ಇವನನ್ನು ಸಂದರ್ಶಿಸಲು ನಿತ್ಯವೂ ಬರುತ್ತಿದ್ದ ಅಸಂಖ್ಯ ಭಕ್ತರಲ್ಲಿ ರಾಜಸ್ತಾನದ ಗಣ್ಯ ಮನ್ನೆಯರೂ ಅಧಿಕ ಸಂಖ್ಯೆಯಲ್ಲಿದ್ದರು. ಅಲ್ಲಾ-ಉದ್-ದೀನ್ ಖಲ್ಜಿಯ ಕಾಲದಲ್ಲಿ ಇವನ ಕೀರ್ತಿ ಎಲ್ಲೆಡೆಯೂ ಹರಡಿತು. ಸುಲ್ತಾನಪುತ್ರ ಖಿಜûರ್ ಖಾನ್ ಇವನ ಶಿಷ್ಯನಾದ.

	ಅಲ್ಲಾ-ಉದ್-ದೀನನ ಅನಂತರ ಪಟ್ಟವೇರಿದ ಮುಬಾರಕ್ ಶಾಹ ಈತನನ್ನು ದ್ವೇಷಿಸುತ್ತಿದ್ದನಷ್ಟೇ ಅಲ್ಲ, ಇವನನ್ನು ತುಚ್ಛವಾಗಿ ಕಾಣುತ್ತಿದ್ದ. ಸುಲ್ತಾನನ ಮಾಸಾರಂಭದ ದರ್ಬಾರಿಗೆ ಬಾರದಿದ್ದ ಈ ಸಂತನನ್ನು ಮರುದಿನ ಹಿಡಿಸಿ ತರಿಸುವುದಾಗಿ ಸುಲ್ತಾನ ಹೇಳಿದ. ಆದರೆ ಅದೇ ದಿನ ಅವನೇ ಕೊಲೆಯಾದ. ಮುಂದಿನ ಸುಲ್ತಾನ ಘಿಯಾಸ್-ಉದ್-ದೀನ್ ತುಗಲಿಕನಿಗೂ ಈ ಸಂತನ ಬಗ್ಗೆ ಅಸಮಾಧಾನವೇ ಇತ್ತು. ಅವನು ಬಂಗಾಲದ ದಂಡೆಯಾತ್ರೆಗೆ ಹೊರಡುವಾಗ, ತಾನು ರಾಜಧಾನಿಗೆ ಹಿಂದಿರುಗುವ ಮೊದಲು ಸಂತ ದೆಹಲಿಯನ್ನು ತ್ಯಜಿಸಬೇಕೆಂದು ಆಜ್ಞಾಪಿಸಿದ. ಆದರೆ ಅವನು ದೆಹಲಿಯನ್ನು ತಲಪುವ ಮೊದಲೇ ಅವನ ಮಗ ಮುಹಮ್ಮದನ ಪಿತೂರಿಯಿಂದ ಆ ಸುಲ್ತಾನ ಹತನಾದ. ಇದೇ ಕಾಲಕ್ಕೆ ದೆಹಲಿಯಲ್ಲಿ ಸಂತ ದೇಹತ್ಯಾಗ ಮಾಡಿದ. ತನಗಾಗಿ ಯಾವುದೇ ಸಮಾಧಿ ಕಟ್ಟುವುದು ಬೇಡವೆಂದು ಈತ ಹೇಳಿದ್ದನಾದರೂ ಮುಹಮ್ಮದ್ ತುಗಲಕ್ ಈತನ ಸಮಾಧಿಯ ಮೇಲೆ ಒಂದು ಕಟ್ಟಡ ಕಟ್ಟಿಸಿದ.

	ನಿಜಾಮ್-ಉದ್-ದೀನ್ ತುಂಬ ಸರಳ ಜೀವನ ನಡೆಸುತ್ತಿದ್ದ. ಒಂದೆರಡು ರೊಟ್ಟಿ, ಸಾದಾ ಪಲ್ಯ-ಇಷ್ಟೇ ಇವನ ಆಹಾರ. ಇವನು ರಾತ್ರಿಯ ಹೊತ್ತು ಅತ್ಯಲ್ಪ ನಿದ್ರೆ ಮಾಡುತ್ತಿದ್ದ. ಬಹುಕಾಲ ಧ್ಯಾನದಲ್ಲೇ ಕಳೆಯುತ್ತಿದ್ದ. ತನ್ನನ್ನು ಕಾಣಲು ಬರುತ್ತಿದ್ದ ಭಕ್ತರ ಕಷ್ಟಸುಖಗಳನ್ನು ವಿಚಾರಿಸಿ ಅವರಿಗೆ ಮನಶ್ಯಾಂತಿ ನೀಡುತ್ತಿದ್ದನಲ್ಲದೆ, ಸದ್ಗುಣ ಕರುಣೆಗಳ ಸಂದೇಶ ಬಿರುತ್ತಿದ್ದ. ಈತ ಮಲ್‍ಫುಜತ್ ಎಂಬ ಕೆಲವು ವಚನಗಳನ್ನು ರಚಿಸಿದ್ದಾನೆ. ಭಾರತದ ಅಗ್ರಗಣ್ಯ ಸೂಫೀ ಸಂತನೀತ. 
(ಎನ್.ಎಸ್.ಕೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ